Product details
ಈ ಪುಸ್ತಕವು ತಾತ್ತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ತತ್ತ್ವಶಾಸ್ತ್ರ ಎಂದರೆ ಅದು ವಿಜ್ಞಾನ, ಗಣಿತಗಳಂತೆ ಮತ್ತೊಂದು ವಿಷಯ ಮಾತ್ರವಲ್ಲ. ಅದು ಯೋಚನೆ ಮಾಡುವ ಒಂದು ಮಾರ್ಗ – ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿರುವ ನಾವು ಯಾರು ಎಂದು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗ. ನಾವು ಕಲಿಯುವ ಉಳಿದ ಎಲ್ಲ ವಿಷಯಗಳ ಅಡಿಪಾಯ ತತ್ತ್ವಶಾಸ್ತ್ರ. ಪ್ರಾಚೀನ ಸಂಸ್ಕೃತಿಗಳಲ್ಲಿ ಮೊಟ್ಟಮೊದಲು ವಿಕಾಸಗೊಂಡ ಶಾಸ್ತ್ರ ಇದು.
ತತ್ತ್ವಶಾಸ್ತ್ರಕ್ಕೆ ದರ್ಶನ ಎನ್ನುವ ಹೆಸರೂ ಇದೆ. ಇದಕ್ಕೆ ಇಂಗ್ಲೀಷಿನಲ್ಲಿ ಫಿಲಾಸಫಿ ಎಂದು ಹೇಳುತ್ತಾರೆ. ಭಾರತದಲ್ಲಿ ದರ್ಶನದ ಹಲವು ಶಾಖೆಗಳು ಇದ್ದವು. ಗ್ರೀಕ್, ಪರ್ಶಿಯನ್, ಚೀನೀ ಮತ್ತು ಅರಬ್ಬೀ ಸಂಸ್ಕೃತಿಗಳಲ್ಲಿ ಕೂಡ ತತ್ತ್ವಶಾಸ್ತ್ರವು ವಿಕಾಸಗೊಂಡಿತ್ತು. ತತ್ತ್ವಶಾಸ್ತ್ರ ಎನ್ನುವ ವಿಷಯವು ಏಷ್ಯಾದಿಂದ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಯೂರೋಪಿಗೆ ಪಸರಿಸಿತು. ವಿಜ್ಞಾನ, ಕಲೆ ಮುಂತಾದ ವಿಷಯಗಳು ತತ್ತ್ವಶಾಸ್ತ್ರದಿಂದಲೇ ಹುಟ್ಟಿದವು, ಹಾಗಾಗಿ ಅವು ತತ್ತ್ವಶಾಸ್ತ್ರದ ಮಕ್ಕಳಿದ್ದಂತೆ. ತಾತ್ತ್ವಿಕವಾಗಿ ಯೋಚನೆ ಮಾಡಲು ಪ್ರಾರಂಭಿಸಿದ ಮೊದಲಿಗರು ಪ್ರಕೃತಿಯ ಬಗ್ಗೆ ಮತ್ತು ನಮ್ಮ ಬದುಕಿನ ಬಗ್ಗೆ ಆಲೋಚಿಸಿದರು. ನಾವು ಈ ಪ್ರಪಂಚವನ್ನು ಹೇಗೆ ನೋಡುತ್ತೇವೆ, ಈ ಜಗತ್ತು ನಮಗೆ ಹೇಗೆ ಕಾಣುತ್ತದೆಯೋ ಹಾಗೆಯೇ ಇದೆಯೇ, ನಾವು ಪರಸ್ಪರ ಮಾತನಾಡುವಾಗ ಭಾಷೆ ಹೇಗೆ ಕೆಲಸ ಮಾಡುತ್ತದೆ, ನಾವು ಹೇಗೆ ಯೋಚಿಸುತ್ತೇವೆ, ಹೊಗೆಯು ಕಂಡಾಗ ಅಲ್ಲಿ ಬೆಂಕಿ ಇದೆ ಎಂದು ಹೇಗೆ ಗೊತ್ತಾಗುತ್ತದೆ ಮುಂತಾದ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದರು. ಅವರು ತಮ್ಮ ಬಗ್ಗೆಯೇ ಪ್ರಶ್ನೆಗಳನ್ನು ಕೇಳಿಕೊಂಡರು. ಮನುಷ್ಯನಿಗೂ ಪ್ರಾಣಿಗಳಿಗೂ, ಮನುಷ್ಯನಿಗೂ ಪ್ರಕೃತಿಗೂ ಇರುವ ಸಂಬಂಧವೇನು, ಮನಸ್ಸು, ಸಂಖ್ಯೆ, ದೇವರು ಮುಂತಾದ ಬೇರೆ ಬೇರೆ ರೀತಿಯ ವಸ್ತುಗಳಿವೆಯೇ ಎಂದೂ ಯೋಚನೆ ಮಾಡಿದರು. ಸಮಾಜವು ಹೇಗೆ ರಚನೆಯಾಗುತ್ತದೆ, ಸಂತೋಷದಿಂದ ಬದುಕುವುದು ಹೇಗೆ, ಒಳ್ಳೆಯ ಮನುಷ್ಯರಾಗುವುದು ಹೇಗೆ ಮುಂತಾದವುಗಳ ಬಗ್ಗೆಯೂ ಅವರು ಅಧ್ಯಯನ ಮಾಡಿದರು. ತತ್ತ್ವಶಾಸ್ತ್ರಜ್ಞರು ಎಷ್ಟು ಕೆಲಸ ಮಾಡುತ್ತಿದ್ದರು ಅಲ್ಲವೇ!
ಹೆಚ್ಚು ಹೆಚ್ಚು ಜ್ಞಾನವು ಸಂಗ್ರಹವಾದಾಗ ತತ್ತ್ವಶಾಸ್ತ್ರವು ಭೌತಶಾಸ್ತ್ರ, ಜೀವಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ ಎಂದೆಲ್ಲ ಬೇರೆ ಬೇರೆ ವಿಷಯಗಳಾಗಿ ಬೆಳೆಯತೊಡಗಿತು. ಹಾಗಾಗಿ, ತತ್ತ್ವಶಾಸ್ತ್ರವು ಈ ಎಲ್ಲ ವಿಷಯಗಳ ತಾಯಿ. ಶಾಲೆಗಳಲ್ಲಿ ನಾವು ತತ್ತ್ವಶಾಸ್ತ್ರವನ್ನು ಕಲಿಸುವುದಿಲ್ಲ, ಆದರೆ ನೀವು ಬೇರೆ ವಿಷಯಗಳನ್ನು ಕಲಿಯುವಾಗ ಸ್ವಲ್ಪ ಸ್ವಲ್ಪ ತತ್ತ್ವಶಾಸ್ತ್ರವನ್ನೂ ಕಲಿತಿರುತ್ತೀರಿ. ನೀವು ಯಾವಾಗಲಾದರೂ `ಇದು ನಿಜವೇ’ ಎಂದು ಕೇಳಿದಾಗ, ಅಥವಾ `ನಿನಗೆ ಇದು ಗೊತ್ತಿದೆ ಎಂದು ಹೇಗೆ ಹೇಳುತ್ತೀಯ’ ಎಂದು ಕೇಳಿದಾಗ ತತ್ತ್ವಶಾಸ್ತ್ರದ ಕೆಲಸವನ್ನು ಮಾಡುತ್ತಿರುತ್ತೀರಿ. ಸತ್ಯ ಸುಳ್ಳುಗಳ ಬಗ್ಗೆ ಮಾತನಾಡಿದಾಗಲೂ ನೀವು ತತ್ತ್ವಶಾಸ್ತ್ರದ ಬಗ್ಗೆಯೇ ಮಾತನಾಡುತ್ತಿರುತ್ತೀರಿ. ಈ ಸಣ್ಣ ಪುಸ್ತಕವು ತತ್ತ್ವಶಾಸ್ತ್ರಜ್ಞರು ಏನೇನು ಹೇಳಿದರು ಎನ್ನುವುದನ್ನು ಕಲಿಸುವುದಿಲ್ಲ. ಬದಲಿಗೆ ತತ್ತ್ವಶಾಸ್ತ್ರ ಎನ್ನುವುದು ಹೇಗೆ ನಮ್ಮ ದಿನನಿತ್ಯದ ಕಲಿಕೆಯ ಭಾಗವಾಗಿದೆ ಎನ್ನುವುದನ್ನು ತೋರಿಸುತ್ತದೆ.
Similar products